Saturday 3 September 2011

ನನ್ನ ಕನಸು

ಕೆಲವೊಂದು ಕನಸುಗಳು ತುಂಬಾ ಸೊಗಸಾಗಿರುತ್ತದೆ. ಅಂತಹ ಒಂದು ಕನಸಿನ ವರ್ಣನೆ.

ಅದೋಂದು ದಿನ ಮುಂಜಾನೆಯ 5 ಗಂಟೆಯ ಸಮಯ. ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿರುವಾಗ ಯಾರೋ ಒಬ್ಬ ಕಿಟಕಿಯನ್ನು ತೆರೆದ. ಕಿಟಕಿಯಿಂದ ಹೊರಗಡೆ ದೃಷ್ಟಿ ಹಾಯಿಸಿದಾಗ ಸುತ್ತ ಹಚ್ಚಹಸಿರಿನಿಂದ ಕಂಗೊಳಿಸುತ್ತ ಇರುವ ಬೆಟ್ಟಗಳನ್ನು ನೋಡಿ ಮನಸ್ಸು ತಡೆಯಲೇ ಇಲ್ಲ.
ಕೂಡಲೆ ಬಸ್ಸಿನ ಚಾಲಕನಲ್ಲಿ ಬಸ್ಸನ್ನು ನಿಲ್ಲಿಸಲು ಹೇಳಿ ನಿಂತ ಕೂಡಲೇ ಕೇಳಕ್ಕೆ ಜಿಗಿದು ಬೆಟ್ಟದತ್ತ ಓಡಿದೆ. ಚಳಿಗಾಲದ ದಿನವಾಗಿದ್ದರಿಂದ ನೆಲ ಕಾಣದಷ್ಟು ಮಂಜು ಕಟ್ಟಿತ್ತು. ಹಾಗೇ ಮುಂದೆ ಸಾಗಿದೆ. ಆಗತಾನೇ ಎದ್ದು ಹಸಿವಾಗಿದೆ ತಿಂಡಿಕೊಡಮ್ಮ ಎನ್ನೊತರದಿ ಕೂಗುತ್ತಿದ್ದ ಪುಟ್ಟ ಹಕ್ಕಿಮರಿಗಳ ಕಲರವ, ಬೆಳಗಿನ ಆಹಾರ ಅರಸಿ ಹೊರಟ ಪಕ್ಷಿಗಳ ಗುಂಪು, ಅಲ್ಲಲ್ಲಿ ಸಂಗೀತದ ಸ್ವರದಂತೆ ಕೇಳಿಬರುತ್ತಿದ ಪಕ್ಷಿಗಳ ಕಲರವ. ಆಗಾಗ ಮೈ ಜುಂ ಎನಿಸುವಂತೆ ಬೀಸುವ ತಂಗಾಳಿ ಇಂತ ಪರಿಸರ ನೋಡಿ ಸ್ವರ್ಗವೇ ಭುವಿಗಿಳಿದಿದೆಯೋ ಅಂತ ಭಾಸವಾಯಿತು. ಹಾಗೇ ಮುಂದಕ್ಕೆ ಸಾಗಿದೆ. ಬಾಯಾರಿಕೆ ಅಯಿತು, ಸುತ್ತಲೂ ಅರಸಿದೆ ಒಂದು ನದಿ ಜುಳುಜುಳು ನಾದದ ಜೊತೆ ಪ್ರಶಾಂತವಾಗಿ ಹರಿಯುತ್ತಿತ್ತು. ಹೊಗಿ ನೀರು ಕುಡಿದೆ. ನೀರೊ ಅಮೃತವೋ ಅಂತ ತಿಳಿಯಲಿಲ್ಲ. ಹಾಗೆಯೇ ಸುತ್ತಲೂ ಕಣ್ಣಾಡಿಸಿದೆ ಆಗ ನದಿಯಾಚೆ ಒಂದು ಮರದಲ್ಲಾದ ಅದ್ಬುತ ಹೂ ಒಂದು ನನ್ನ ಮನಸೆಳೆಯಿತು. ಬಾ ಎಂದು ನನ್ನ ಕೂಗಿದಂತಾಗಿ ಹೇಗೊ ಭಗೀರತ ಪ್ರಯತ್ನ ಮಾಡಿ ನದಿ ದಾಟಿ ಮರವನ್ನ ಏರುವ ಸಮಯದಿ ಕಾಲು ಜಾರಿ ಕೆಳಗೆ ಬಿದ್ದೆ.

ಎದ್ದು ನೋಡಿದಾಗ ನಾ ಬಿದ್ದಿದ್ದು ಮರದಿಂದಲ್ಲ ನಮ್ಮ ಮನೆ ಮಂಚದಿಂದ ಅಂತ ತಿಳಿಯಿತು. ಇದು ನನಗೆ ಕಂಡ ಕನಸಾದರೂ ಮಾನವ ಪರಿಸರವನ್ನು ನಾಶ ಮಾಡುತ್ತಿದ್ದರೆ ಮುಂದಿನ ಪೀಳಿಗೆ ಸುಂದರ ಪರಿಸರವನ್ನು ಕನಸಲ್ಲಿ ನೋಡಬೇಕಾಗುವುದು ಎಂಬುದು ವಿಪರ್ಯಾಸ.

No comments:

Post a Comment