Monday 26 December 2011

ಕೂಲಿ

ದಿನವಿಡಿ ದುಡಿವ
ಬೆವರ ಸುರಿಸುವ
ಮೈಯನು ಮುರಿವ
ಕಷ್ಟವ ಪಡುವ
ಇವರು ಕೂಲಿಯವರು

ಬಳಲಿ ಬೆಂದಿರುವ
ಎದೆಗೂಡನುಬ್ಬಿಸಿರುವ
ಮೂಳೆಮುರಿವಂತೆ ಭಾರ ಹೊರುವ
ಬೇಸತ್ತು ಸತ್ತಂತಿರುವ
ಇವರು ಕೂಲಿಯವರು

ಚಿತ್ರವಿಚಿತ್ರ ಛಾಯೆ ಮೈಯಲಿ ಮೂಡಿರುವ
ಅಸ್ಪಷ್ಟ ಬದುಕ ಚಿತ್ರಣ ಇರುವ
ಬಾಳಿನ ಕಷ್ಟದ ಚಿತ್ತಾರವ
ಚಿತ್ತದಿ ಬರೆಸಿಕೊಂಡಿರುವ
ಇವರು ಕೂಲಿಯವರು

ಬದುಕು-ಬವಣೆಯ ನಡುವಿನಲಿ
ಹರಿದ-ಕರಿದ ಬೆಂದ ರೊಟ್ಟಿಗಳ
ಒಳಗೆ ರಕ್ತ ಮಡುಗಟ್ಟಿತ್ತಿದ್ದರೂ
ಎದೆಗುಂದದೆ ಈಸಿ ಜೈಸುವ
ಇವರು ಕೂಲಿಯವರು

ಬಂದು ಕೊಂದು ತಿಂದ ಜನರೆಡೆಯಲಿ
ರಕ್ತದೋಕುಳಿಯ ಮಾಸದಾ ಹೆಜ್ಜೆಯಲಿ
ನಾತ ಬೀರುವ ಕೊಳೆತಂತಿರುವ
ಅಸ್ಥಿಪಂಜರದೊಂದಿಗೆ ದುಡಿವ
ಇವರು ಕೂಲಿಯವರು

ಹಬ್ಬ ದಿಬ್ಬಣದಲ್ಲೂ
ಹಿಟ್ಟಿರದ ಬರಿ ಹೊಟ್ಟೆಯಲಿ
ಮುರುಕಲು ಗುಡಿಸಲ ಹಳೆಮಂಚದಲಿ
ನಿದ್ದೆ ಬಾರದೇ ನಡುರಾತಿಯಲಿ
ಮಬ್ಬು ಕತ್ತಲೆಯಲಿ ಕಣ್ಣು ಮಿಟುಕಿಸುವ
ಇವರು ಕೂಲಿಯವರು

ಗೆದ್ದಲು ಕೆಡವಿ ಬಣ್ಣಹೋದ
ಹರಿದ ಉಡು ಬಟ್ಟೆ
ಆದ್ರೂ ಗಟ್ಟಿಯಿದೆ ಇವರ ರಟ್ಟೆ
ಬುತ್ತಿ ರೊಟ್ಟಿಯಲಿ ಬದುಕುವ
ಇವರು ಕೂಲಿಯವರು

ಕನಸುಗಳ ಹೆಣೆಯುವ
ಒಣದೇಹದಿ ಬತ್ತಿದಾ
ಎದೆಯಲಿನ ಆಸೆ ಮುದ್ದಿಸಿ
ಅವಕಾಶವ ಸದಾ ಬಯಸುವ
ಇವರು ಕೂಲಿಯವರು

ಇವರು ಅಳುವುದಿಲ್ಲ ಅತ್ತಿಲ್ಲ
ದಿನಾ ಅಳುವವರಿಗೆ ಎಲ್ಲಿಂದ
ಪೂರ್ತಿಜೀವನವು ಗೋಳು
ಗೊಳೆಂಬ ಈದ್ ಹೋಳಿಯಾಚರಿಸುವ
ಇವರು ಕೂಲಿಯವರು

No comments:

Post a Comment