Monday 26 December 2011

ಕವಿತೆಗೊಂದು ಕವನ

ಕಾಯುತ ನಾನು ಕುಳಿತಿಹೆನು
ಮುಂಜಾನೆಯ ಇಬ್ಬನಿಯ ಮೈಕೊರೆವ ಚಳಿಯಲಿ
ಮನಸೆಳೆವ ಸುಂದ ಹಸಿರು ಹುಲ್ಲುನೆದುರಲಿ
ಕಾದಿರುವೆ ಕವಿತೆ ಬರೆಯ ಬೇಕೆನ್ನುತಲಿ
ಕವಿತೇ ನೀನೆಲ್ಲಿ ಅವಿತಿರುವೆ

ಇಬ್ಬನಿ ದುಃಖದ ಕಂಬನಿಗಳಂತೆ ಕಂಡರೂ
ಮನಸ್ಸಿನಲ್ಲಿ ದುಗುಡ ಕೈ ನಡುಗಿಲು
ಬರೆಯಲಾಗದಾಯಿತೆನ್ನಿಂದ ಕವಿತೆಯ
ತೋಚದಾಯಿತೆನಗೆ ಪದಗಳು ಕೂಡ
ಕವಿತೇ ನೀನೆಲ್ಲಿ ಅವಿತಿರುವೆ

ಎಳ ಬಿಸಿಲ ಹೊಂಗಿರಣ ನೋಡುತ
ಜಿನುಗುವ ತುಂತುರು ಮಳೆಯ ನೋಡುತ
ಬರೆಯ ಬೇಕೆನಿಸಿತು ಕವಿತೆ ಮತ್ತೊಮ್ಮೆ
ಈಗಲೂ ಮತ್ತೆ ಅದೇ ತೊಂದರೆ
ಕವಿತೇ ನೀನೆಲ್ಲಿ ಅವಿತಿರುವೆ

ಅದೇ ಯೋಚನೆ ಮುಸ್ಸಂಜೆಗೆ
ಮುದುಡಿ ಹೋಗುವ ಈ ಸುಮದ ಬದುಕಂತೆ
ಮತ್ತೆ ನಡುಕವೆಂದೆನಿಸಿತು ಕವಿತೆ ಬರೆಯಲೇನು?
ಮತ್ತೆ ಬರೆಯೋಣ ಅಂದು ಕೊಂಡರೆ
ಕವಿತೇ ನೀನೆಲ್ಲಿ ಅವಿತಿರುವೆ

ಉರಿಯುವ ಮಧ್ಯಾಹ್ನದ ಬೇಗೆಯಂತೆ
ಮನದಾಳದ ಯಾತನೆ ಮುಸ್ಸಂಜೆಯಲಿ
ಬಿರಿಯುವ ಮಲ್ಲಿಗೆಯ ಹೂವಿನಂತೆ
ಗೂಡು ಸೇರುವ ಹಕ್ಕಿಚುಕ್ಕಿಯಂತೆ
ಕಾದರೂ ಬಾರದೇ ಕವಿತೇ ನೀನೆಲ್ಲಿ ಅವಿತಿರುವೆ

ನಭದಿ ಚಂದ್ರಮನು ಕಾಣುತಿರಲು
ಕವಿತೆಗೆ ಹುಡುಕಿದರೆ ಪದ ಪುಂಜಗಳು ಸಿಗದಿರಲು
ಏನ ಬರೆಯಲಿ ನಾ ಖಾಲಿ ಪುಟದಲಿ
ಕವಿತೆ ಬರೆವುದು ಇಂದೆನಗೆ ಕನಸಾಯ್ತೆ
ಕವಿತೆ ನೀನೆಲ್ಲಿ ಅವಿತು ಕುಳಿತಿಹೆ

ಬಾನಂಗಳದಿ ನಸುನಗುವ ಚಂದಿರನ
ಇಕ್ಕೆಲಗಳಲ್ಲಿ ಕಣ್ಣು ಮಿಟುಕಿಸುವ ತಾರೆಗಳ
ನೋಡುತಿರೆ ಮನದಿ ಮಿಂಚಂತೆ ಸಾಲೊಂದು
ನೆನಪಾದರೂ ಬರೆಯಲಾಗದಾಯಿತು
ಕವಿತೇ ನೀನೆಲ್ಲಿ ಅವಿತು ಕುಳಿತಿರುವೆ

ಆಗೊಮ್ಮೆ ಈಗೊಮ್ಮೆ ಬೀಳುವತಿರುವ
ಉಲ್ಕೆಗಳಂತೆ ಜೀವನದಿ ಕಷ್ಟ ಸುಖಗಳದ್ವಂದ್ವ
ಒಂದೆರಡು ಸಾಲು ಬರೆಯಲೂ ತಡಕಾಟ
ಮುನಿಸೇತಕೆ ನಿನಗೆ ಕವಿತೇ ನೀ ಬರುವುದೆಂದು
ಕವಿತೇ ನೀನೆಲ್ಲಿ ಅವಿತು ಕುಳಿತಿರುವೆ

ಬರೆಯಲೆಂದು ಲೇಖನಿ ಹಿಡಿದು ಕುಳಿತಾಗ
ಶಬ್ದಗಳಿಗೆ ತಡಕಾಡಿ ಭಾವಗಳಿಗೆ ಹುಡುಕಾಡಿ
ಪ್ರಾಸಕ್ಕೆ ಸಾಲುಗಳಿಗೆ ತಿಣುಕಾಡಿ
ಕಷ್ಟ ಪಟ್ಟರೂ ಬರೆಯಲಾಗದಾಗಿದೆಯಿಂದು
ಕವಿತೇ ನೀನೆಲ್ಲಿ ಅವಿತು ಕುಳಿತಿರುವೆ

ವಿಷಯದ ಆಳ ಹೊಕ್ಕಿ ಕೆದಕಿ ತೆಗೆವ
ಪಾಂಡಿತ್ಯವಂತೂ ನನ್ನಲಿಲ್ಲ
ಅರಿಯದೆ ಸುಮ್ಮನಿರುವ ಮುಗ್ದನೂ ಅಲ್ಲ
ಕೆದಕಿ ಬರೆಯಲೂ ಸಾದ್ಯವಾಗದಾಗಿದೆಯಿಂದು
ಕವಿತೇ ನೀನೆಲ್ಲಿ ಅವಿತು ಕುಳಿತೆ

ಕವಿತೆಯಲಿ ಪ್ರತೀ ಪದವು ಹೊಸತೆಂದೆನಿಸುವುದು
ಹೊಸ ಕಾರಣವನು ಹುಡುಕುವುದು
ಗೊತ್ತು ಗೊತ್ತಿಲ್ಲಗಳ ಬಡಿದಾಟದಿ
ಬರೆಯಲು ಹೊರಟ ನನಗಿಂದು ಅಸಾದ್ಯವಾಗಿದೆ
ಕವಿತೇ ನೀನೆಲ್ಲಿ ಅವಿತು ಕುಳಿತಿರುವೆ

ಮನಸಿನಲಿ ಕನಸೆಂಬ ಕಲ್ಪನೆಯುಲಿ
ಕಾಣದ ಪದಗಳ ದಾರಿಯ ಹುಡುಕುತ
ಕಳೆಯುತ್ತಾ ಆಯುಷ್ಯವೆಂಬ ಸಮಯವ
ಕಾದು ಕುಳಿತೆ ಕವಿತೆ ನಾ ಬರೆಯಲೆಂದು
ಕವಿತೇ ನೀನೆಲ್ಲಿ ಅವಿತು ಕುಳಿತಿರುವೆ

ನೋವಿಗೆ ನಲಿವಿಗೆ ಯೋಚನೆಗೆ
ಸದಾ ತೋಚುತ್ತಿದ್ದ ಪದಗಳಿಂದು
ತನ್ನದೇ ಬಳಗವ ಬೆಳೆಸಿಕೊಂಡು
ನನ್ನಿಂದ ದೂರಕೆ ಸರಿಸುತ್ತಿದೆ
ಕವಿತೇ ನೀನೆಲ್ಲಿ ಅವಿತು ಕುಳಿತಿರುವೆ

ಎಷ್ಟು ಕರೆದರೂ ನಿನಗೆ ಕರುಣೆ ಬಾರದೆ
ಚಿತ್ತ ಚುಚ್ಚಿ ನಿ ಎತ್ತ ಓಡುತಿರುವೆ
ಬಾವನೆಗಳ ಭಾಷೆಯರಿತ ನೀನೇ
ನನಗಿಂದೇಕೆ ಹೀಗೆ ಕಾಡುತಿರುವೆ
ಕವಿತೇ ನೀನೆಲ್ಲಿ ಅವಿತು ಕುಳಿತಿರುವೆ

No comments:

Post a Comment