Monday 26 December 2011

ಒಂದು ದಿನ

ಅದೊಂದು ಸುಂದರ ಮುಂಜಾನೆಯಾಗಿತ್ತು
ಚಳಿಯಲಿ ಹೆದರಿದ ಇಬ್ಬನಿಯೊಂದು
ಈ ಧರೆಯ ಸೇರುವ ಸಮಯದಿ
ಮೂಡಣದಿ ದಿನಕರನು ಮೂಡಿ ಬಂದನು
ಬೆಳ್ಳಿಬೆಳಕನು ರವಿಯು ತಂದನು

ಬೆಳಕು ಎಲ್ಲೆಡೆ ಪಸರಿಸಲು
ಪಕ್ಷಿಗಳು ನಿದ್ರೆಯನು ಮುಗಿಸಿ
ಇಳಾದೇವಿಯ ಏಳಿಸಲೆಂದವು
ಚಿಲಿಪಿಲಿ ಸದ್ದನು ಮಾಡಿದವು
ನಲಿದಾಡುತ ಬಲು ಸಂಭ್ರಮಿಸಿದವು

ಓಡಲು ರವಿಯು ಪಡುವಣದೆಡೆಗೆ
ದಿನಕರ ಮೇಲಕೆ ಏರಿದ್ದಂತೆ
ಮರಗಳ ಎಲೆಮೇಲಿದ್ದಂತಾ
ಇಬ್ಬನಿಗಳು ಒಂದೊದಾಗಿ
ಜಾರಿ ಬಿದ್ದವು ಇಳೆಯ ಮೇಲೆ

ಮಲಗಿದ್ದಾಕೆಯ ಏಳಿಸಲು
ನೆಲದಮೇಲೆ ಹರಡಿದ್ದಂತಹ
ಜೇಡರ ಬಲೆ ಒಂದು ಇದನ್ನ ಕಂಡು
ಬೀಳಲು ಬಿಡೆನು ನಾ ಹನಿಗಳನು
ಎಂದು ಹಿಡಿಯಿತು ಕೆಲ ಹನಿಗಳನು

ಎಚ್ಚರಗೊಂಡ ಬೂಮಾತೆ
ಅವಸರದಿಂದಲಿ ಹಸಿರ ಸೀರೆಯನುಟ್ಟು
ಕಂದು ಬಣ್ಣದ ಕುಪ್ಪಸವನ ತೊಟ್ಟು
ಅಂದಗಾತಿಯು ತಾನೆಂದು
ಆನಂದದಿ ಬಂದದಳು ನಗುನಗುತ

ಓಡು ಆಟವನು ಆಡಿದರು
ಓಡಿ ಓಡಿ ನಲಿದಾಡಿದರು
ಭೂದೇವಿಯು ಸೋತು ಕಡೆಕಡೆಗೆ
ಬಳಲಿ ಬೆಂಡಾಗಿ ಓಡೋ ಆಟದಲಿ
ಹಿಡಿಯದಾದಳು ದಿನಕರನನ್ನ

ಸೋತೆನೆಂದು ತಾ ಒಪ್ಪಿದಳು
ಇಳೆಯೆ ನೀನಿನ್ನು ವಿಶ್ರಮಿಸು
ನಾಳೆ ಬರುವೆನು ಬೇಗನೆ ಎಂದು
ಪಡುವಣವನು ಸೇರಿದನು
ಲೋಕಕೆ ನಿದ್ರೆಯ ಉಣಿಸಿದನು

ಆಗಸದಿ ಕಪ್ಪು ಕವಿದಿಹುದು
ಹಾರುತಿಹುದು ಬೆಳ್ಳಕ್ಕಿ ದಂಡು
ಶಾಲೆ ಪೋರರು ಉತ್ಸಾಹದಿಂದಿರಲು
ಮತ್ತೆ ಸುರಿಯಲಾರಂಭಿಸಿತ್ತಂದು
ಸಂಜೆಯ ಮುಂಗಾರಿನ ಮಳೆ

ಮೂಡಣದಿ ಮೂಡಿಹುದು ಸಪ್ತವರ್ಣದಿ
ಮದನನ ಬಿಲ್ಲು ಬರುತಿಹ ವರ್ಷೆಯ ಸ್ವಾಗತಕೆ
ಕಪ್ಪೆಗಳು ಕರಕರ ಸದ್ದಲಿ ಮಾಡುತಿಹುದು ಭಾಷಣವ
ಭವ್ಯ ಸ್ವಾಗತದ ಬಳಿಕ ಮಳೆಯು
ಹನಿ ಹನಿಯಾಗಿ ಇಳೆಗೆ ಬೀಳಲಾರಂಬಿಸಿತು

ಗೋಧೂಳಿಯ ಸಮಯದಿ
ನಾಸಿಕವನು ಹೊಕ್ಕು
ತನುಮನವನು ಪುಳಕಿಸುವಂತೆ
ಬರುತಿತ್ತು ಧೂಳಿನಾ ಕಂಪು
ಹೊರಟವು ಭುವಿಯೊಡಲಿಂದ ಹಾತೆಗಳ ಗುಂಪು

ಸುತ್ತ ದೀಪಗಳ ಬೆಳಕಲಿ ಗರಿಗೆದರುತ್ತ
ಕುಣಿದಿಹುದು ನವಿಲುಗಳ ಒಡೆಯ
ಸಂತಸದಲಿ ನಲಿಯುತ್ತಿದೆ
ಮೃಗಖಗಗಳ ಪಡೆಯು
ಪಡೆಯುತ ಮಳೆರಾಯನ ಮುತ್ತಿನ ಮತ್ತನ್ನು

ಭುವಿ ತಾನೂ ಸಂತಸದೊಳು
ಮೈಮನ ಮರೆಯುತಲಿಹಳು
ಕಣಿಕಾಲುವೆಗಳಲಿ ಕೆಂಬಣ್ಣದ ನೀರು
ಧುಮುಕುತ್ತಲೆ ಸಾಗುತ್ತಿದೆ ತನ್ನ ಗುರಿಯೆಡೆಗೆ
ಮುತ್ತಿನಂತೆ ಕಂಗೊಳಿಸುತ್ತಿತ್ತು ಹನಿ ಕೆಸುವಿನೆಲೆಮೇಲೆ

ದಿನವದು ಮುಗಿದಿತ್ತು
ಬಾನಲಿ ತಿಂಗಳು ಮೂಡಿತ್ತು
ಊಟವ ಮಾಡಿ ಆಗಿತ್ತು
ನಿದ್ದೆಯು ನನ್ನನು ಕರೆದಿತ್ತು
ನಾನೋಡಿದ ದಿನವೊಂದು ಹೀಗಿತ್ತು

1 comment:

  1. ಪ್ರಕೃತಿ ಮಾತೆಯಾ ರಮ್ಯತೆಯನ್ನು ಚಂದವಾಗಿ ವರ್ಣಿಸಿದ್ದೀರಿ.....ಇಷ್ಟವಾಯ್ತು

    ReplyDelete